ಶೃಂಗೇರಿಯ ಶಂಕರ ಗಿರಿಯಲ್ಲಿ ನಿರ್ಮಾಣವಾಗಿರುವ 32 ಅಡಿ ಎತ್ತರದ ಶ್ರೀ ಶಂಕರಾಚಾರ್ಯರ ಪ್ರತಿಮೆ ಸಾರ್ವಜನಿಕರಿಗೆ ದರ್ಶನ ಮಾಡಲು ಮೇ 19 ರಿಂದ ಮುಕ್ತವಾಗಲಿದೆ ಎಂದು ಶ್ರೀ ಮಠದಿಂದ ಮಾಹಿತಿ ದೊರಕಿದೆ.
ಶ್ರೀ ಶಂಕರ ಭಗವತ್ಪಾದಾಚಾರ್ಯರ 32 ಅಡಿ ಎತ್ತರದ ಗ್ರಾನೈಟ್ ಪ್ರತಿಮೆಯನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಗಳು ಮತ್ತು ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿಗಳು ಉದ್ಘಾಟಿಸಿ ಪೂಜೆ ಸಲ್ಲಿಸಿದ್ದರು.
ಪಶ್ಚಿಮ ಘಟ್ಟಗಳ 360 ಡಿಗ್ರಿಯ ರಮಣೀಯ ನೋಟವನ್ನು ನೀಡುವ ಈ ಪ್ರಶಾಂತ ಆವರಣವು ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಮೊದಲ ಆಚಾರ್ಯರಾದ ಶ್ರೀ ಸುರೇಶ್ವರಾಚಾರ್ಯ ಸೇರಿದಂತೆ ಶ್ರೀ ಶಂಕರರ ನಾಲ್ಕು ಪ್ರಾಥಮಿಕ ಶಿಷ್ಯರ ಮೂರ್ತಿಗಳನ್ನು ಸಹ ಒಳಗೊಂಡಿದೆ. ಶ್ರೀ ಶಂಕರಾಚಾರ್ಯರ ಪ್ರತಿಮೆ ದರ್ಶನಕ್ಕೆ ಮೇ 19 ರಿಂದ ಶ್ರೀ ಮಠಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರು ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ಮಠದವರು ಮಾಹಿತಿ ನೀಡಿದ್ದಾರೆ.