ಕೊಪ್ಪ ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ನಿಲುಗಡೆಗೆ ಕೊನೆಗೂ ಬ್ರೇಕ್ ಬಿದ್ದಿದೆ. *ಕೊಪ್ಪ ತಹಶಿಲ್ದಾರ್ ಲಿಖಿತಾ ಮೋಹನ್ ಖಡಕ್ ಆದೇಶ*
ಸಾರ್ವಜನಿಕರಿಂದ ಪರ- ವಿರೋಧ. ಬಸ್ ನಿಲ್ದಾಣದ ಒಳಗೆ ಯಾವುದೇ ಖಾಸಗಿ ವಾಹನ ನಿಲ್ಲಿಸಬಾರದು. ಬಸ್ ಗಳ ನಿಲುಗಡೆಗೆ ಸಹ ತೊಂದರೆ ಆಗುತ್ತದೆ ಎಂದು ಈ ಹಿಂದೆಯೇ ಪಟ್ಟಣ ಪಂಚಾಯಿತಿ ಮತ್ತು ಪೋಲಿಸ್ ಇಲಾಖೆಯ ಜಂಟಿ ಸಹಯೋಗದೊಂದಿಗೆ ನಾಮಫಲಕ ಅಳವಡಿಸಲಾಗಿತ್ತು. ಆದರೆ ಇದು ಬರೀ ಆದೇಶಕ್ಕೆ ಮಾತ್ರ ಸೀಮಿತ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿತ್ತು. ನಿನ್ನೆ ಕೊಪ್ಪದ "ಗಾರ್ಬೇಜ್ ಟು ಗಾರ್ಡನ್" ವಾಟ್ಸಪ್ ಗ್ರೂಪಿನಲ್ಲಿ ಪಟ್ಟಣದ ಬಗ್ಗೆ ಕಳಕಳಿ ಹೊಂದಿದ ಸಾರ್ವಜನಿಕರೊಬ್ಬರು ಬಹಳ ವಿಸ್ತಾರವಾದ ಬರಹದಡಿ ಕೊಪ್ಪ ಪಟ್ಟಣದ ಸಮಸ್ಯೆಗಳನ್ನು ಪ್ರಚುರಪಡಿಸಿದ್ದರು. ಇದರಲ್ಲಿ ಬಸ್ ನಿಲ್ದಾಣದ ತೊಂದರೆ ಬಗ್ಗೆ ಸಹ ವರದಿ ಮಾಡಿದ್ದರು. ಇಂದು ಎಚ್ಚೆತ್ತ ಪಟ್ಟಣ ಪಂಚಾಯಿತಿ ಮತ್ತು ತಹಶಿಲ್ದಾರ್ ಅವರು ಸಂಜೆ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ನಿಲ್ದಾಣದ ಒಳಗೆ ಇದ್ದ ವಾಹನಗಳನ್ನು ತೆರವುಗೊಳಿಸಿದರು, ಇನ್ನು ಮುಂದೆ ಯಾವುದೇ ಖಾಸಗಿ ವಾಹನ ನಿಲುಗಡೆ ಮಾಡಿದಲ್ಲಿ ದಂಡ ವಿಧಿಸಲು ಮತ್ತು ಕಠಿಣ ಕ್ರಮ ಕೈಗೊಳ್ಳಲು ಖಡಕ್ ಆದೇಶ ಹೊರಡಿಸಿದರು. ಇದನ್ನು ಕೆಲವು ಸಾರ್ವಜನಿಕರು ಸ್ವಾಗತಿಸಿದರೆ ಕೆಲವರು ವಿರೋಧ ಸಹ ವ್ಯಕ್ತಪಡಿಸಿದ್ದಾರೆ. ಬಸ್ ಗಳಲ್ಲಿ ಬರುವ ಸರಕು ಸಾಗಣೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹಮಾಲಿ ವೃತ್ತಿ ಮಾಡುವ ಅಬ್ಬಾಸ್ ಹೇಳಿದರೆ, ಬಸ್ ನಿಲ್ದಾಣದ ಒಳಗಿನ ಕೆಲ ಅಂಗಡಿ ಮಾಲಿಕರು ತಮ್ಮ ಅಂಗಡಿಗಳಿಗೆ ಬರುವ ಸರಕು ಇಳಿಸಲು ವಾಹನಗಳಿಗೆ ಅವಕಾಶ ಕೊಡಬೇಕು ಎಂದರು.ಒಟ್ಟಾರೆ ಸಾರ್ವಜನಿಕರ ಹಿತಾಸಕ್ತಿ ಒಳಗೊಂಡಂತೆ ಯಾರಿಗೂ ತೊಂದರೆ ಆಗದಂತೆ ಕ್ರಮ ಕೈಕೊಂಡರೆ ಒಳಿತು ಎಂದು ಕೊಪ್ಪದ ಕೆಲವು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿ ಜಾರಿಗೆ ತಂದರೆ ಒಳ್ಳೆಯದು ಎಂದು ಕಾಫಿನಾಡು ನ್ಯೂಸ್ ಬಳಗದ ಆಶಯ.