ಚಿಕ್ಕಮಗಳೂರು :-
ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ಮತಗಳ ಮರುಎಣಿಕೆ!
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮೇ 2ರಂದು ಅಂಚೆ ಮತಗಳ ಮರು ಎಣಿಕೆ ನಡೆಯಲಿದೆ. ಐಡಿಎಸ್‌ಜಿ ಕಾಲೇಜಿನಲ್ಲಿ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜಿಲ್ಲಾಡಳಿತ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮೇ 2ರಂದು ಬೆಳಿಗ್ಗೆ 8 ಗಂಟೆಗೆ ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಎಣಿಕೆ ಪ್ರಕ್ರಿಯೆ ಶುರುವಾಗುತ್ತದೆ. ಚುನಾವಣಾಧಿಕಾರಿ ಗೌರವಶೆಟ್ಟಿ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದ್ದು, ಅವರಿಗೆ ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಸಾಥ್ ನೀಡಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಜೀವರಾಜ್ ವಿರುದ್ಧ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ಆ ಚುನಾವಣೆಯಲ್ಲಿ ಒಟ್ಟು 2,811 ಅಂಚೆ ಮತಗಳ ಪೈಕಿ 279 ಮತಗಳನ್ನು ತಿರಸ್ಕರಿಸಲಾಗಿತ್ತು. ಈ ತಿರಸ್ಕೃತ ಮತಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಪ್ರಿಲ್ 6ರಂದು ಮರುಎಣಿಕೆಗೆ ಸೂಚನೆ ನೀಡಿತ್ತು.
ಬದಲಾಗುತ್ತದಾ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚಿತ್ರಣ:-
ಇಷ್ಟು ದಿನ ಶೃಂಗೇರಿ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರಿದ್ದರೂ , ಅಭಿವೃದ್ಧಿ ಕಾರ್ಯದಲ್ಲಿ ಹಿಂದೆ ಬಿದ್ದಿತ್ತು ಶೃಂಗೇರಿ ಕ್ಷೇತ್ರ ಎಂದು ಸಾರ್ವಜನಿಕ ವಲಯದಲ್ಲಿ ದಟ್ಟವಾದ ಅಭಿಪ್ರಾಯ ಕೇಳಿಬರುತ್ತಿತ್ತು. ಸತತ ಎರಡು ಬಾರಿ ಆಯ್ಕೆ ಆದರೂ ಸಹ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಆಡಳಿತ ಪಕ್ಷದ ಶಾಸಕರು ಅಷ್ಟು ಕಾಳಜಿವಹಿಸದೆ ಬರೇ ವಿದೇಶ ಪ್ರವಾಸ , ಹೊರ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಆದ್ಯತೆ ಕೊಟ್ಟು ,ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸದೆ ಕಾಲಹರಣ ಮಾಡಿದರು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಾಜಿ ಶಾಸಕರು ಮರುಎಣಿಕೆಯಲ್ಲಿ ಏನಾದರೂ ಮತ್ತೆ ಆರಿಸಿ ಬಂದಲ್ಲಿ ಕ್ಷೇತ್ರದಲ್ಲಿ ಬಿ.ಜೆ.ಪಿ.ಪಕ್ಷ ತನ್ನ ನೆಲೆ ಗಟ್ಟಿ ಮಾಡಿಕೊಳ್ಳಲು ಒಂದು ಅವಕಾಶ ಮತ್ತೊಮ್ಮೆ ಸಿಗಲಿದೆ ಎಂಬುದು ಬಿ.ಜೆ.ಪಿ.ಕಾರ್ಯಕರ್ತರ ಅಭಿಲಾಷೆಯಾಗಿದೆ.