ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಸಂಜೆ ಭೀಕರ ಉಗ್ರರ ದಾಳಿ ನಡೆದಿದ್ದು, 20 ಕ್ಕೂ ಹೆಚ್ಚು ಮಂದಿಯನ್ನು ಉಗ್ರರು ಕೊಂದು ಹಾಕಿದ್ದಾರೆ. ಈ ವೇಳೆ ಗಂಡನನ್ನು ಕಳೆದುಕೊಂಡ ಮಹಿಳೆಯರು ಕಣ್ಣೀರು ಹಾಕುವ ವಿಡಿಯೋ ವೈರಲ್
ಘಟನೆ ಸುಮಾರು ಮಧ್ಯಾಹ್ನ 1.30 ರ ವೇಳೆಗೆ ನಡೆದಿದೆ. ಮಹಿಳೆರು ಉಗ್ರರ ದಾಳಿ ಬೆನ್ನಲ್ಲೇ ಭಯಾನಕ ಕ್ಷಣಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. " ನನ್ನ ಗಂಡ ಮುಸ್ಲಿಮ್ ಅಲ್ಲದ್ದಕ್ಕೆ ಉಗ್ರ ಶೂಟ್ ಮಾಡಿದ " ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಮತ್ತೊಂದು ವಿಡಿಯೋದಲ್ಲಿ " ನನ್ನ ಗಂಡನನ್ನು ಕಾಪಾಡಿ ಕಾಪಾಡಿ " ಎನ್ನುತ್ತಾ ಮಹಿಳೆ ಅಳುತ್ತಿರುವುದು ಸೆರೆಯಾಗಿದೆ. ಇನ್ನೊಂದು ವಿಡಿಯೋದಲ್ಲಿ ಕರ್ನಾಟಕ ಮಹಿಳೆಯು " ಉಗ್ರನೊಬ್ಬ ನಾನು ನಿನ್ನ ಕೊಲ್ಲಲ್ಲ. ಮೋದಿಗೆ ಇದನ್ನು ಹೋಗಿ ಹೇಳು ಅಂತಾ " ಎಂದು ಹೇಳಿದ್ದಾರೆ.
ಗಂಡನನ್ನು ಕಳೆದುಕೊಂಡ ಶಿವಮೊಗ್ಗ ಮೂಲದ ಪಲ್ಲವಿ
" ಏಪ್ರಿಲ್ 19ಕ್ಕೆ ನಾವು ಕಾಶ್ಮೀರಕ್ಕೆ ಬಂದಿದ್ದೇವು. ಮೂರು ದಿನ ಎಲ್ಲವೂ ಸರಿಯಿತ್ತು. ಆದರೆ, ಇವತ್ತು ದುರಂತ ನಡೆದುಬಿಟ್ಟಿದೆ. ನನ್ನ ಮಗ ಏನಾದ್ರೂ ತಿನ್ನೋಕೆ ಕೊಡಿಸು ಅಂತಾ ಕೇಳಿದ. ಅದಕ್ಕೆ ಅವರು ಅಂಗಡಿಯಲ್ಲಿ ಏನಾದ್ರೂ ತರುತ್ತೇನೆ ಇರು ಅಂತಾ ಹೋದರು. ಆಗ ನಮಗೆ ಗನ್ ಫೈಯರ್ ಆದ ಶಬ್ಧ ಕೇಳಿತು. ಆದರೆ, ಅದು ಪೊಲೀಸರು ಏನಾದ್ರೂ ಪರೀಕ್ಷೆ ಮಾಡುತ್ತಿರುತ್ತಾರೆ ಅನ್ಕೊಂಡಿದ್ವೀ.. ಆದರೆ, ನನ್ನ ಪತಿಯನ್ನು ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನನ್ನ ಕಣ್ಣೇದುರೆ ನನ್ನ ಪತಿ ಸಾವನ್ನಪ್ಪಿದ್ದಾರೆ. ಅಲ್ಲಿದ್ದ ಪ್ರವಾಸಿಗರು ಓಡಿ.. ಓಡಿ ಎಂದು ಕಿರುಚುತ್ತಿದ್ದರು. ಈ ವೇಳೆ ಉಗ್ರರನ್ನು ನಮ್ಮಿಬ್ಬರನ್ನು ಕೂಡ ಶೂಟ್ ಮಾಡಿ ಸಾಯಿಸಿ ಎಂದು ಕೇಳಿಕೊಂಡೆ. ಅದಕ್ಕೆ ಉಗ್ರರು ಮೋದಿಗೆ ಹೋಗಿ ಹೇಳಿ ಅಂತಾ ನಮ್ಮಿಬ್ಬರನ್ನು ಜೀವಂತ ಬಿಟ್ಟರು" ಎಂದು ತಾವು ಉಗ್ರರ ಗನ್ ಪಾಯಿಂಟ್‌ನಿಂದ ಬದುಕುಳಿದ ಭಯಾನಕ ಅನುಭವವನ್ನು ಶಿವಮೊಗ್ಗ ಮೂಲದ ಪಲ್ಲವಿ ಬಿಚ್ಚಿಟ್ಟಿದ್ದಾರೆ.
ಉಗ್ರರ ದಾಳಿಗೆ ಬಲಿಯಾಗಿರುವ ಮಂಜುನಾಥ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕುಣಿಮಕ್ಕಿ ಅವರು. ಶಿವಮೊಗ್ಗದಲ್ಲಿ ವಾಸವಿದ್ದು ಕಳೆದ ಮೂರು ತಿಂಗಳ ಹಿಂದೆ ಬಂದು ಹೋಗಿದ್ದರು ಎನ್ನಲಾಗಿದೆ.